November 6, 2021
ಕುಂದಾಪುರ (ನ,07): ನಮ್ಮ ಹಿರಿಯರ ಆಚರಣೆಗಳಲ್ಲಿ ವೈಜ್ಞಾನಿಕ ಅರ್ಥ ಇರುತ್ತದೆ. ಅದನ್ನೆಲ್ಲ ಅನುಸರಿಸಿದ ಕಾರಣಕ್ಕೆ ಅವರು ಆಯುಷ್ಯ ಮತ್ತು ಆರೋಗ್ಯವನ್ನು ಕಾಪಾಡಿಕೊಂಡರು. ನಮ್ಮ ಸಾಂಪ್ರದಾಯಿಕ ಆಚರಣೆಗಳನ್ನು ಮುಂದಿನ ತಲೆಮಾರಿಗೆ ದಾಟಿಸಬೇಕು. ಆ ನಿಟ್ಟಿನಲ್ಲಿ ನಮ್ಮ ಕಾಲೇಜಿನಲ್ಲಿ ಶಿಕ್ಷಣದ ಜೊತೆಗೆ, ವೈವಿಧ್ಯಮಯ ಕಾರ್ಯಕ್ರಮಗಳ ಮೂಲಕ ಎಲ್ಲಾ ಹಬ್ಬದ ಆಚರಣೆಯ ಮಹತ್ವವನ್ನು ನಮ್ಮ ವಿದ್ಯಾರ್ಥಿಗಳಿಗೆ ತಿಳಿಸುವ ಪ್ರಯತ್ನ ಮಾಡುತಿದ್ದೇವೆ ಎಂದು ಕುಂದಾಪುರದ ಡಾ.ಬಿ.ಬಿ. ಹೆಗ್ಡೆ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಕೊತ್ತಾಡಿ ಉಮೇಶ್ ಶೆಟ್ಟಿಯವರು ತಿಳಿಸಿದರು. ಅವರು ಕಾಲೇಜಿನ ಕನ್ನಡ ವಿಭಾಗದ ಆಶ್ರಯದಲ್ಲಿ ನಡೆದ ದೀಪಾವಳಿ ಸಂಭ್ರಮ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
ಮುಖ್ಯ ಅತಿಥಿಗಳಾಗಿದ್ದ ಕುಂದಗನ್ನಡದ ಹಾಸ್ಯ ಪ್ರತಿಭಾವಂತ ಶ್ರೀ ಚೇತನ್ ಶೆಟ್ಟಿ ನೈಲಾಡಿ ದೀಪಾವಳಿಯ ಬಲೀಂದ್ರ ಕರೆಯುವಿಕೆ ವೈಶಿಷ್ಟ್ಯತೆ, ಹಬ್ಬದ ಕ್ರಮಗಳನ್ನು ಹಾಗೂ ಅದರ ಮಹತ್ವವನ್ನು ರಸವತ್ತಾಗಿ ವಿವರಿಸಿದರು.
ಉಪ ಪ್ರಾಂಶುಪಾಲ ಚೇತನ್ ಶೆಟ್ಟಿ ಕೋವಾಡಿ ಹಬ್ಬದ ಸಂಭ್ರಮವನ್ನು ಪ್ರಾಸ್ತಾವಿಕವಾಗಿ ತಿಳಿಸಿದರು. ಉಪನ್ಯಾಸಕಿ ಪ್ರವೀಣಾ ಪೂಜಾರಿ ಸ್ವಾಗತಿಸಿ, ರೇಷ್ಮಾ ಶೆಟ್ಟಿ ವಂದಿಸಿ, ಸುಕುಮಾರ್ ಶೆಟ್ಟಿ ನಿರೂಪಿಸಿದರು.
ಕಾಲೇಜಿನಲ್ಲಿ ದೀಪಾವಳಿ ಆಚರಣೆ:
ದೀಪಾವಳಿ ಹಬ್ಬದ ಕ್ರಮದಂತೆ, ವಿವಿಧ ಹೂವುಗಳನ್ನು ತಂದು, ನೆಣೆ ದೀಪ ಹಚ್ಚಿ, ವಿದ್ಯಾರ್ಥಿಗಳಾದ ಪ್ರಸನ್ನ ಮತ್ತು ಸಂಪತ್ ತಂಡದವರು ಸಾಂಪ್ರದಾಯಿಕವಾಗಿ ಬಲೀಂದ್ರ ಕರೆದು ಪೂಜೆ ಸಲ್ಲಿಸಿದರು.
ವಿದ್ಯಾರ್ಥಿಗಳು ಗೀತ ಗಾಯನದ ಮೂಲಕ ಹಬ್ಬದ ಸಂಭ್ರಮ ಹೆಚ್ಚಿಸಿದರು. ನಂತರ ಲಕ್ಷ್ಮಿ ಪೂಜೆ ಮತ್ತು ಸಂಸ್ಥೆಯ ವಾಹನ ಪೂಜೆಗಳನ್ನು ನೆರವೇರಿಸಲಾಯಿತು. ಬೋಧಕ ಮತ್ತು ಬೋಧಕೇತರರು ಹಾಗೂ ವಿದ್ಯಾರ್ಥಿಗಳೆಲ್ಲರೂ ಸಾಂಪ್ರದಾಯಿಕ ಧಿರಿಸಿನೊಂದಿಗೆ ಉಪಸ್ಥಿತರಿದ್ದು ಗಮನಸೆಳೆದರು.